ಟ್ರಾಟ್ಸ್ಕಿ, ಲೀಯಾನ್
1877-1940. ಸೋವಿಯೆತ್ ರಾಜಕೀಯ ನಾಯಕ, ಮಾಕ್ರ್ಸ್‍ವಾದಿ. ಶ್ರೇಷ್ಠ ಬರೆಹಗಾರ, ವಾಕ್ಪಟು, ಕೆಂಪು ಸೈನ್ಯದ ಪ್ರಾರಂಭದ ಪ್ರಮುಖ ಸಂಘಟಕ. ನಿಜನಾಮ ಲಿಯಾಫ್ ಡವಿಡವ್ಯಿಚ್ ಬ್ರನ್‍ಷ್ಟೈನ್. ಯುಕ್ರೇನಿನ ಬಾಬ್ರಿನೆಟ್ಸ್ ಬಳಿಯ ಯನೋಪ್ಕದಲ್ಲಿ 1879ರ ಅಕ್ಟೋಬರ್ 26ರಂದು ಜನಿಸಿದ. ತಂದೆ ಡವಿಡ್ ಲಿಯಾಂಟಿಯೆವಿಚ್ ಬ್ರನ್‍ಷ್ಟೈನ್ ಯೆಹೂದಿ ರೈತ. 1897ರಲ್ಲಿ ಟಾಟ್ಸಿ ಓಡೆಸ್ಸದ ನವ ರಷ್ಯ ವಿಶ್ವವಿದ್ಯಾಲಯಕ್ಕೆ ಗಣಿತಶಾಸ್ತ್ರ ಅಭ್ಯಾಸಮಾಡಲು ಹೋದ. ಆದರೆ ಸ್ವಲ್ಪಕಾಲದಲ್ಲೇ ಅದನ್ನು ಬಿಟ್ಟು ಕ್ರಾಂತಿಕಾರಿಯಾದ ; ಒಡೆಸ್ಸ ಮತ್ತು ನಿಕಲಾಯೆಫ್‍ಗಳಲ್ಲಿ ಸಮಾಜವಾದಿ ಪ್ರಜಾಸತ್ತಾತ್ಮಕ ವಲಯಗಳಲ್ಲಿ ಚಟುವಟಿಕೆಗಳಲ್ಲಿ ನಿರತನಾದ. 1898ರಲ್ಲಿ ಬಂಧನಕ್ಕೊಳಗಾಗಿ 1900ರಲ್ಲಿ ಸೈಬೀರಿಯಕ್ಕೆ ಗಡಿಪಾರು ಮಾಡಲ್ಪಟ್ಟ. ಆದರೆ 1902ರಲ್ಲಿ ಅಲ್ಲಿಂದ ತಪ್ಪಿಸಿಕೊಂಡು ದೇಶದಿಂದ ಹೊರಕ್ಕೆ ಓಡಿಹೋಗಿ ಲೆನಿನ್ನನ ಇಸ್ಕ್ರಾ ಸಂಘವನ್ನು ಸೇರಿದ. ಟ್ರಾಟ್ಸ್ಕಿ ಆ ಸಂಸ್ಥೆಯ ಪ್ರಮುಖ ಪ್ರಚಾರಕನಾಗಿದ್ದರೂ, ಲೆನಿನ್ನನ ಧೋರಣೆಗಳೂ ವಿಧಾನಗಳೂ ಅಂತಿಮವಾಗಿ ಏಕವ್ಯಕ್ತಿಯ ಸರ್ವಾಧಿಕಾರಕ್ಕೆ ಹಾದಿಮಾಡಿಕೊಡುವುದೆಂಬುದು ಅವನಿಗೆ ಮನವರಿಕೆಯಾಯಿತು. 1903ರಲ್ಲಿ ನಡೆದ ರಷ್ಯನ್ ಸಮಾಜವಾದಿ ಪ್ರಜಾಸತ್ತಾತ್ಮಕ ಕಾರ್ಮಿಕ ಪಕ್ಷದ ದ್ವೀತಿಯ ಕಾಂಗ್ರೆಸ್ಸಿನಲ್ಲಿ ಆ ಪಕ್ಷ ಇಬ್ಭಾಗವಾಯಿತು. ಟ್ರಾಟ್ಸ್ಕಿ ಮೆನ್‍ಷೆವಿಕ್ ಮುಂದಾಳಾಗಿ ಲೆನಿನ್ನನ ಪ್ರಮುಖ ವಿರೋಧಿಯಾದ. 1904ರಿಂದ 1905ರ ವರೆಗೆ ಮ್ಯೂನಿಚಿನಲ್ಲಿ ಮಾಕ್ರ್ಸ್‍ವಾದಿ ಪಾರ್ವಸನ (ಎ. ಐ. ಹೆಲ್ಫಾಂಡ್) ಜೊತೆಗೂಡಿ ಕೆಲಸ ಮಾಡಿ, ಶಾಶ್ವತ ಕ್ರಾಂತಿ ಕುರಿತ ತನ್ನ ಸಿದ್ಧಾಂತವನ್ನು ರೂಪಿಸಿದ. 1905ರಲ್ಲಿ ಕ್ರಾಂತಿಯ ಸಮಯದಲ್ಲಿ ಆತ ರಷ್ಯಕ್ಕೆ ಹಿಂದಿರುಗಿ ಚಳವಳಿಯಲ್ಲಿ ನಿರತನಾದ. ಸೇಂಟ್ ಪೀಟರ್ಸ್‍ಬರ್ಗ್ ಕಾರ್ಮಿಕ ಪ್ರತಿನಿಧಿಗಳ ಸೋವಿಯೆತ್‍ನ ಪ್ರಮುಖ ಮುಂದಾಳೆನಿಸಿಕೊಂಡ. ಪುನಃ 1907ರಲ್ಲಿ ಸೈಬೀರಿಯಕ್ಕೆ ಇವನ ಗಡಿಪಾರಾಯಿತು. ಹಾದಿಯಲ್ಲೇ ಈತ ತಪ್ಪಿಸಿಕೊಂಡು ವಿಯೆನ್ನಕ್ಕೆ ಪಲಾಯನಮಾಡಿದ.

ಆ ವೇಳೆಗೆ ಪಕ್ಷದಲ್ಲಿ ಒಡಕುಂಟಾಗಿ ಅನೇಕ ಪಂಗಡಗಳಾಗಿದ್ದುವು. ಎಲ್ಲ ಸಮಾಜವಾದಿ ಪ್ರಜಾಪ್ರಭುತ್ವಾತ್ಮಕ ಪಂಗಡಗಳೂ ಗುಂಪುಗಳೂ ಒಂದಾಗಬೇಕೆಂಬುದು ಟ್ರಾಟ್ಸ್ಕಿಯ ಅಭಿಪ್ರಾಯವಾಗಿತ್ತು. ಇದನ್ನು ಕಾರ್ಯರೂಪಕ್ಕೆ ತರಲು ಯತ್ನಿಸಿದ್ದರ ಫಲವೆಂದರೆ ಇನ್ನೊಂದು ಪಂಗಡದ ಉದಯ. ಟ್ರಾಟ್ಸ್ಕಿಯ ಅಭಿಪ್ರಾಯವನ್ನು ಒಪ್ಪುವವರೆಲ್ಲ ಇದರಲ್ಲಿ ಒಂದಾದರು. ಟ್ರಾಟ್ಸ್ಕಿಯೇ ವಿಯೆನ್ನದಿಂದ ಸಂಪಾದಿಸುತ್ತಿದ್ದ ಪ್ರಾವ್ದಾ ಎಂಬ ಪತ್ರಿಕೆ ಆ ಪಂಗಡದಿಂದ ಪ್ರಕಟವಾಗುತ್ತಿತ್ತು. ವಿವಿಧ ಪಂಗಡಗಳನ್ನು ಒಂದುಗೂಡಿಸುವ ಉದ್ದೇಶದಿಂದ ಅವನು ಇನ್ನೊಂದು ಪ್ರಯತ್ನ ಮಾಡಿದ: 1912ರಲ್ಲಿ ವಿಯನ್ನದಲ್ಲಿ ಆಗಸ್ಟ್ ಸಮ್ಮೇಳನವನ್ನು ಕರೆದ. ಆದರೆ ಬಹುತೇಕ ಬಾಲ್ಷೆವಿಕರೂ ಪಕ್ಷ ಭಾವನೆಯ ಮೆನ್ಷೆವಿಕರೂ ಅದನ್ನು ಬಹಿಷ್ಕರಿಸಿದ್ದರಿಂದ ಬಹುತೇಕ ಮೆನ್ಷೆವಿಕ್ ಗುಂಪುಗಳು ಒಟ್ಟುಗೂಡಿದುವು. ಮತ್ತೆ ಟ್ರಾಟ್ಸ್ಕಿ ಮೆನ್ಷೆವಿಕ್ ನಾಯಕನಾದ. ಒಂದನೆಯ ಮಹಾಯುದ್ಧ ಆರಂಭವಾದಾಗ ಟ್ರಾಟ್ಸ್ಕಿ ವಿಯೆನ್ನವನ್ನು ಬಿಟ್ಟು ಸ್ವಿಟ್ಜರ್ಲೆಂಡಿಗೆ ಹೋಗಿ ಅಲ್ಲಿಂದ ಫ್ರಾನ್ಸಿಗೆ ತೆರಳಿದ. ಯುದ್ಧದಲ್ಲಿ ಈತನದು ಅಂತರರಾಷ್ಟ್ರೀಯ ದೃಷ್ಟಿಯಾಗಿತ್ತು. ಆದರೆ ರಷ್ಯಕ್ಕೆ ಸೋಲಾಗಬೇಕೆಂಬ ಲೆನಿನ್ ವಾದಕ್ಕೆ ಅವನ ವಿರೋಧವಿತ್ತು.

ಕೆಲವು ತಿಂಗಳುಗಳ ಕಾಲ ಅಮೆರಿಕದಲ್ಲಿದ್ದು 1917ರ ಫೆಬ್ರುವರಿ-ಮಾರ್ಚ್ ಕ್ರಾಂತಿಯ ಅನಂತರ ಟ್ರಾಟ್ಸ್ಕಿ ರಷ್ಯಕ್ಕೆ ಮರಳಿ. ಪೆಟ್ರೊಗ್ರಾಡಿನಲ್ಲಿ ಬಹುತೇಕವಾಮವಾದಿ ಬಾಲ್ಷೆವಿಕರಿಂದಲೂ ಮೆನ್ಷೆವಿಕರಲ್ಲಿ ತನ್ನ ಅನುಯಾಯಿಗಳಾಗಿದ್ದವರಿಂದಲೂ ಕೂಡಿದ್ದ ಅಂತರರಾಷ್ಟ್ರೀಯವಾದಿ ಅಂತರ-ಜಿಲ್ಲಾ ಸಮೂಹವನ್ನು ಸೇರಿಕೊಂಡ, ಬಾಲ್ಷೆವಿಕರು ಅಧಿಕಾರವನ್ನು ಆಕ್ರಮಿಸಿಕೊಳ್ಳಬೇಕೆಂದು ಉದ್ದೇಶದಿಂದ ಲೆನಿನ್ ಪ್ರತಿಪಾದಿಸಿದ ಏಪ್ರಿಲ್ ಪ್ರಮೇಯಗಳಲ್ಲಿ ಸೂಚಿಸಲಾದ ನೀತಿ ತನ್ನ ಶಾಶ್ವತ ಕ್ರಾಂತಿಯ ಸಿದ್ಧಾಂತದಂತೆಯೇ ಇದೆಯೆಂದು ಟ್ರಾಟ್ಸ್ಕಿ ಭಾವಿಸಿದ. ಆದ್ದರಿಂದ ತನ್ನ ಅಂತರ-ಜಿಲ್ಲಾ ಸಮೂಹವನ್ನು ಬಾಲ್ಷೆವಿಕ್ ಪಕ್ಷದಲ್ಲಿ ವಿಲೀನಗೊಳಿಸಲು ಯತ್ನಸಿದ. ಜುಲೈ-ಆಗಸ್ಟ್‍ನಲ್ಲಿ ನಡೆದ ಪಕ್ಷದ ಕಾಂಗ್ರೇಸ್‍ನಲ್ಲಿ ಟ್ರಾಟ್ಸ್ಕಿ ಕೇಂದ್ರ ಸಮಿತಿಗೆ ಆಯ್ಕೆಯಾದ. ಜುಲೈನಲ್ಲಿ ನಡೆದ ಬಾಲ್ಷೆವಿಕ್ ಆಕ್ರಮಣ ಯತ್ನದ ಫಲವಾಗಿ ಇವನು ಆಗ ಸೆರೆಮನೆಯಲ್ಲಿದ್ದ. ಟ್ರಾಟ್ಸ್ಕಿ ಬಿಡುಗಡೆ ಹೊಂದಿದ ಮೇಲೆ ಕಾರ್ಮಿಕರು ಮತ್ತು ಯೋಧರ ಪ್ರೆಟ್ರೋಗ್ರಾಡ್ ಸೋವಿಯೆತ್‍ನ ಅಧ್ಯಕ್ಷನಾದ.

ಸ್ವಲ್ಪಕಾಲ ಟ್ರಾಟ್ಸ್ಕಿ ಸೋವಿಯೆತ್ ಸರ್ಕಾರದ ಮತ್ತು ಜನತೆಯ ಪ್ರತಿನಿಧಿಯಾಗಿ ಜರ್ಮನಿಯೊಂದಿಗೆ ಶಾಂತಿ ಸ್ಥಾಪಿಸುವ ದಿಸೆಯಲ್ಲಿ ಸೋವಿಯೆತ್ ನಿಯೋಗದ ಮುಂದಾಳುತನವನ್ನು ವಹಿಸಿದ. ರಷ್ಯ ಹೋರಾಟ ನಿಲ್ಲಿಸಿದರೂ ಸಾಮ್ರಾಜ್ಯಷಾಹಿ ಸರ್ಕಾರವೊಂದರೊಡನೆ ಶಾಂತಿ ಒಡಂಬಡಿಕೆಗೆ ಸಹಿ ಹಾಕಬಾರದೆಂದು ಟ್ರಾಟ್ಸ್ಕಿ ಪ್ರತಿಪಾದಿಸಿದ ; ಆದರೆ ಜರ್ಮನಿ ಮತ್ತೆ ಆಕ್ರಮಣದಲ್ಲಿ ತೊಡಗಿದಾಗ ಶಾಂತಿಯ ಪರವಾಗಿ ಲೆನಿನ್ನೊಂದಿಗೆ ಇವನೂ ಮತ ನೀಡಿದ. 1918ರ ಮಾರ್ಚ್‍ನಿಂದ ಟ್ರಾಟ್ಸ್ಕಿ ಸೈನಿಕ ಹಾಗೂ ನೌಕಾ ವ್ಯವಹಾರಗಳಲ್ಲಿ ಜನತಾ ಕಮಿಸಾರ್ ಆದ. ಕೆಂಪು ಸೈನ್ಯವನ್ನು ಸಂಘಟಿಸುವ ಕಾರ್ಯದಲ್ಲಿ ಮೊದಮೊದಲು ತನ್ನೆಲ್ಲ ಶಕ್ತಿಯನ್ನೂ ವಿನಿಯೋಗಿಸಿದ.

ಅಂತರ್ಯುದ್ಧದಲ್ಲಿ ಬಾಲ್ಷೆವಿಕರು ವಿಜಯ ಸಾಧಿಸಿದರು. ಆ ಸಮಯದಲ್ಲಿ ಲೆನಿನ್_ಟ್ರಾಟ್ಸ್ಕಿಗಳ ಹಳೆಯ ವಿರಸ ಪ್ರಕಟವಾಗಲಿಲ್ಲ. ಆದರೆ 1920-21ರಲ್ಲಿ ನಡೆದ ಕಾರ್ಮಿಕ ಸಂಘ ಚರ್ಚೆಯಲ್ಲಿ ಅವರ ನಡುವೆ ಭಿನ್ನಭಿಪ್ರಾಯ ಉದ್ಭವಿಸಿತು. ಆಗ ಟ್ರಾಟ್ಸ್ಕಿ ತನ್ನ ಎಂದಿನ ನಿಲುವನ್ನು ಬದಲಿಸಿದ. ಕಾರ್ಮಿಕರನ್ನು ಬಲವಂತದಿಂದ ಕೈಗಾರಿಕೆಯಲ್ಲಿ ತೊಡಗಿಬೇಕೆಂದೂ ಬಂಡವಾಳವಾದಿ ಆರ್ಥಿಕತೆಯಿಂದ ಸಮಾಜವಾದಿ ಆರ್ಥಿಕತೆಯ ಪರಿವರ್ತನೆಯ ಕಾಲದಲ್ಲಿ ಶ್ರಮಜೀವಿಗಳ ಪ್ರಜಾಪ್ರಭುತ್ವವನ್ನು ತಾತ್ಕಲಿಕಾವಾಗಿ ರದ್ದು ಮಾಡಬೇಕೆಂದೂ ವಾದಿಸಿದ.

ಇತರರೊಂದಿಗೆ ವ್ಯವಹರಿಸುವಾಗ ಟ್ರಾಟ್ಸ್ಕಿ ಕೌಶಲದಿಂದ ವರ್ತಿಸುತ್ತಿರಲಿಲ್ಲ. ಮೂರ್ಖರೆಂದರೆ ಅವನಿಗೆ ಬಲು ಅಸಹನೆ. ಆದ್ದರಿಂದ ಅಂತರ್ಯುದ್ಧದ ಸಮಯದಲ್ಲಿ ಅನೇಕರು ಅವನ ಶತ್ರುಗಳಾದರು. ಅವನ ಬಗ್ಗೆ ಸದಾ ಅಸಮಾಧಾನಗೊಳ್ಳುತ್ತಿದ್ದ ಸ್ಟಾಲಿನನ ದ್ವೇಷವನ್ನೂ ಅವನು ಸಂಪಾದಿಸಿಕೊಂಡ. ಟ್ರಾಟ್ಸ್ಕಿ ಬಾಲ್ಷೆವಿಕ್ ಪಕ್ಷಕ್ಕೆ ತಡವಾಗಿ ಬಂದಿದ್ದರಿಂದ ಅದರ ನಿರ್ವಹಣೆಯನ್ನು ಕುರಿತ ಜಟಿಲ ವಿಚಾರಗಳಲ್ಲಿ ಅವನು ಅಷ್ಟೇನೂ ನಿಷ್ಣಾತನಾಗಿರಲಿಲ್ಲ. ಇವುಗಳಲ್ಲಿ ಸ್ಟಾಲಿನ್ ಪರಿಣತನಾಗಿದ್ದ. ಟ್ರಾಟ್ಸ್ಕಿಯನ್ನು ರಕ್ಷಿಸಬಲ್ಲವನಾಗಿದ್ದ ಲೆನಿನ್ ಇಲ್ಲವಾದ ಮೇಲೆ ಸ್ಟಾಲಿನನ ವಿರುದ್ಧ ಸೆಣಸಾಟದಲ್ಲಿ ಅವನು ಸೋತುಹೋದ. ಲೆನಿನ್ 1924ರಲ್ಲಿ ತೀರಿಕೊಂಡಾಗ ಟ್ರಾಟ್ಸ್ಕಿಯೇ ನಾಯಕನಾದಾನೆಂದು ನಿರೀಕ್ಷಿಸಲಾಗುತ್ತದೆ. ಆದರೆ ಸ್ಟಾಲಿನ್ ಇತರರ ಜೊತೆಗೂಡಿ ಟ್ರಾಟ್ಸ್ಕಿಯ ವಿಜಯಕ್ಕೆ ಅಡ್ಡಿ ತಂದ. ಪಾಲಿಟ್‍ಬ್ಯೂರೋದ ಸದಸ್ಯನಾಗಿ ಟ್ರಾಟ್ಸ್ಕಿ ಮುಂದುವರಿದರೂ ಸರ್ಕಾರದಲ್ಲಿ ಅವನು ಎಲ್ಲ ಅಧಿಕಾರ-ಸ್ಥಾನಗಳನ್ನೂ ಕಳೆದುಕೊಂಡ. 1927ರಲ್ಲಿ ಅಂತಿಮವಾಗಿ ಆತನಿಗೆ ಪರಾಜಯವಾಯಿತು. ಅದುವರೆಗೂ ಅವನು ರಾಜಕೀಯವಾಗಿ ಹಾಗೂ ವೈಯಕ್ತಿಕವಾಗಿ ತನ್ನ ಪ್ರತಿಸ್ಪರ್ಧಿಗಳೊಡನೆ ಹೋರಾಟ ನಡೆಸುತ್ತಲೇ ಇದ್ದ. ಆತನದು ತೀವ್ರಗಾಮಿ ವಾಮ ಪಂಥ. ಮೊಟ್ಟಮೊದಲಿಗೆ ಒಂದು ದೇಶದಲ್ಲಿ ಸಮಾಜವಾದವನ್ನು ಕಟ್ಟಬೇಕು-ಎಂಬ ಸ್ಟಾಲಿನ್ ವಿಚಾರಣೆಗೆ ಅವನ ವಿರೋಧವಿತ್ತು. ಸೋವಿಯೆತ್ ರಾಜ್ಯದಿಂದ ವಿಶ್ವಕ್ರಾಂತಿಗೆ ಮುನ್ನಡೆಯಬೇಕೆಂಬುದು ಅವನ ವಾದ. 1926-27ರಲ್ಲಿ ಅವನು ವಾಮ ಪಂಥದ ಸಂಯುಕ್ತ ಪ್ರತಿಭಟನೆಯಲ್ಲಿ ಭಾಗವಹಿಸಿದ. ಆದರೆ ಸ್ಟಾಲಿನ್ ಗುಂಪಿನಿಂದ ಅವನಿಗೆ ಸೋಲಾಯಿತು. ಪಾಲಿಟ್-ಬ್ಯೂರೋದಿಂದಲೂ ಪಕ್ಷದಿಂದಲೂ ಅವನಿಗೆ ಉಚ್ಚಾಟನೆಯಾಯಿತು. 1928ರ ಜನವರಿಯಲ್ಲಿ ಅವನು ಮಧ್ಯ ಏಷ್ಯದ ಆಲ್ಮ-ಆಟಕ್ಕೆ ಗಡಿಪಾರಾದ. 1929ರ ಫೆಬ್ರವರಿಯಲ್ಲಿ ಸೋವಿಯೆತ್ ದೇಶದಿಂದಲೇ ಅವನನ್ನು ಹೊರತಳ್ಳಲಾಯಿತು. 1932ರಲ್ಲಿ ಅವನು ಸೋವಿಯೆತ್ ಪೌರತ್ವವನ್ನು ಕಳೆದುಕೊಂಡ. ತುರ್ಕಿ(1929-33), ಫ್ರಾನ್ಸ್ (1933-35). ನಾರ್ವೇ (1935-36)-ಈ ದೇಶಗಳಲ್ಲಿ ಇದ್ದು ಅಂತಿಮವಾಗಿ 1937ರಲ್ಲಿ ಮೆಕ್ಸಿಕೋದಲ್ಲಿ ನೆಲಸಿದ. ಉದ್ದಕ್ಕೂ ಅವನು ಸ್ಟಾಲಿನ್ ನೀತಿಯನ್ನು ಕಟುವಾಗಿ ಖಂಡಿಸುತ್ತಲೇ ಇದ್ದ. ವಿದೇಶೀ ಕಮ್ಯೂನಿಷ್ಟರಲ್ಲಿ ಟ್ರಾಟ್ಸ್ಕಿಯಿಸ್ಟರಿಗೆ ಇವನೇ ತಾತ್ತ್ವಿಕನಾಯಕ. 1936-38ರಲ್ಲಿ ಸ್ಟಾಲಿನ್ ಕೈಗೊಂಡ ಶುದ್ಧೀಕರಣ ಕ್ರಮದಲ್ಲಿ ಟ್ರಾಟ್ಸ್ಕಿಯನ್ನು ವಿಶೇಷವಾಗಿ ಟೀಕಿಸಲಾಯಿತು. ಸೋವಿಯೆತ್ ದೇಶದೊಳಗಿದ್ದ ತನ್ನ ಅನುಯಾಯಿಗಳು ಅಂತಧ್ರ್ವಂಸ ಕಾರ್ಯಗಳಲ್ಲಿ ನಿರತರಾಗುವಂತೆ ಹೊರಗಿನಿಂದ ಅವರಿಗೆ ಟ್ರಾಟ್ಸ್ಕಿ ಪ್ರೇರಣೆ, ಪ್ರೋತ್ಸಾಹ, ನಿರ್ದೇಶನ ನೀಡುತ್ತಿದ್ದಾನೆಂದು ಆಪಾದಿಸಲಾಯಿತು. 1940ರಲ್ಲಿ ಹಂತಕನೊಬ್ಬ ವೇಷ ಮರೆಸಿಕೊಂಡು ಟ್ರಾಟ್ಸ್ಕಿಯ ಮನೆಯೊಳಹೊಕ್ಕು ಅವನನ್ನು ಪ್ರಾಣಾಂತಿಕವಾಗಿ ಗಾಯಗೊಳಿಸಿದ (ಆಗಸ್ಟ್ 20). ಮರುದಿನ ಟ್ರಾಟ್ಸ್ಕಿ ತೀರಿಕೊಂಡ. ಸ್ಟಾಲಿನನೇ ಅವನನ್ನು ಕೊಲೆ ಮಾಡಿಸಿದನೆಂದು ಹೇಳಲಾಗಿದೆ.

ಸೋವಿಯೆತ್ ದೇಶದ ರಾಜಕೀಯದಲ್ಲಿ ಟ್ರಾಟ್ಸ್ಕಿಗೆ ಇನ್ನೂ ಸ್ಥಾನಮಾನ ಇದ್ದಾಗ, 1925ರಲ್ಲಿ, ಮಾಸ್ಕೋದಲ್ಲಿ ಅವನ ಕೃತಿಗಳ ಸಂಕಲನದ ಪ್ರಕಟನೆಯ ಕಾರ್ಯ ಆರಂಭವಾಗಿತ್ತು. ಆದರೆ 1927ರಲ್ಲಿ ಇದು ನಿಂತುಹೋಯಿತು. ಟ್ರಾಟ್ಸ್ಕಿಯ ಬರಹಗಳ ಇಂಗ್ಲಿಷ್ ಭಾಷಾಂತರಗಳು ಹಲವು ಪ್ರಕಟವಾಗಿವೆ. ಅವುಗಳಲ್ಲಿ ಮುಖ್ಯವಾದವು ಇವು : ಅವರ್ ರೆವಲ್ಯೂಷನ್ (1918), ದಿ ಡಿಫೆನ್ಸ್ ಆಫ್ ಟೆರರಿಸಂ (1921), ಬಿಟ್ವೀನ್ ರೆಡ್ ಅಂಡ್ ಹ್ವೈಟ್ (1922), ದಿ ಲೆಸನ್ಸ್ ಆಫ್ ಅಕ್ಟೋಬರ್, 1917 (1925), ಪ್ರಾಬ್ಲೆಮ್ಸ್ ಆಫ್ ಲೈಫ್ (1924), ಲೆನಿನ್ (1925), ಲಿಟರೇಚರ್ ಅಂಡ್ ರೆವಲ್ಯೂಷನ್ (1925), ಟುವಡ್ರ್ಸ್ ಸೋಷಿಯಲಿಸ್ಮ್ ಆರ್ ಕ್ಯಾಪಿಟಲಿಸ್ಮ್ ? (1926), ಪ್ರಾಬ್ಲೆಮ್ಸ್ ಆಫ್ ಚೈನೀಸ್ ರೆವಲ್ಯೂಷನ್ (1932). ದಿ ಹಿಸ್ಟೋರಿ ಆಫ್ ದಿ ರಷ್ಯನ್ ರೆವಲ್ಯೂಷನ್ (ಮೂರು ಸಂಪುಟಗಳು) (1932-33), ದಿ ಸಪ್ರೆಸ್ಡ್ ಟೆಸ್ಟಮೆಂಟ್ ಆಫ್ ಲೆನಿನ್ (1936), ದಿ ರೆವಲ್ಯೂಷನ್ ಬಿಟ್ರೇಡ್ (1937), ದಿ ಸ್ಟಾಲಿನ್ ಸ್ಕೂಲ್ ಆಫ್ ಫಾಲ್ಸಿಫಿಕೇಷನ್ (1937), ದೆರ್ ಮಾರಲ್ಸ್ ಅಂಡ್ ಅವರ್ಸ್ (1939), ಸ್ಟಾಲಿನ್ (1946), ಪರ್ಮನೆಂಟ್ ರೆವಲ್ಯೂಷನ್ (1947), ಡೈಯರಿ ಇನ್ ಎಗ್ಸೈಲ್. 1935 (1958).

ಟ್ರಾಟ್ಸ್ಕಿಯಿಸಮ್ ಎಂದು ಕರೆಯಬಹುದಾದಂಥ ಸಮಗ್ರ ಚಿಂತನ ಮಾರ್ಗವೇನನ್ನೂ ಟ್ರಾಟ್ಸ್ಕಿ ಸೃಷ್ಟಿಸಲಿಲ್ಲ. ಅವನು ತಾತ್ತ್ವಕಾಭ್ಯಾಸವೇನನ್ನೂ ಮಾಡಿದವನಲ್ಲ. ಪ್ರಮಾಣಬದ್ಧವಾಗಿ ನಿರ್ಣಯ ನೀಡಬಲ್ಲನೆಂದೂ ಕಮ್ಯೂನಿಸಂ ಧುರೀಣರು ಯಾರೂ ಅವನನ್ನು ಪರಿಗಣಿಸಿರಲಿಲ್ಲ. ಅವನ ಮನಸ್ಸು ಏಕಮುಖವಾಗಿ ಹರಿಯುತ್ತಿರಲಿಲ್ಲ. ಅವನ ಆಸಕ್ತಿಗಳು ನಾನಾ ಬಗೆ. ಆದ್ದರಿಂದ ಯಾವುದೇ ವಿಷಯದ ಬಗ್ಗೆ ಅಲೋಚನೆ ಹರಿಸಲು ಆತ ಅಸಮರ್ಥನಾದ. ಕಮ್ಯೂನಿಸ್ಟ್ ಚಳವಳಿಯಲ್ಲಿ ಟ್ರಾಟ್ಸ್ಕಿ ಹೆಸರು ಗಳಿಸಿದ್ದು ವಿಚಾರವಾದಿಯೆಂದಲ್ಲ ; ಸಂಘಟಕನಾಗಿ, ಲೇಖಕನಾಗಿ, ಭಾಷಣಕಾರನಾಗಿ. ಅವನ ಆಲೋಚನೆಗಳು ಅವನ ಗೌರವವನ್ನು ಹೆಚ್ಚಿಸಲು ಸ್ವಲ್ಪಮಟ್ಟಿಗೆ ಕಾರಣವಾದುವಷ್ಟೆ. ಲೆನಿನ್ ಒಂದೇ ಒಂದು ಸಾರಿ ಟ್ರಾಟ್ಸ್ಕಿಯಿಸಂ ಬಗ್ಗೆ ಹೇಳಿದ್ದುಂಟು. ಅದು 1912ರಲ್ಲಿ ಆದರೆ ಅವನ ಆ ಮಾತಿನಲ್ಲಿ ವ್ಯಂಗ್ಯವಿತ್ತು. ಕೇವಲ ಟೊಳ್ಳು ಪದಪುಂಜ, ಕೇವಲ ಟ್ರಾಟ್ಸ್ಕಿಯಿಸಂ ಎಂದು ಆತ ಅರ್ಥಪೂರ್ಣವಾಗಿ ಆಡಿದ್ದ. 1923-24ರಲ್ಲಿ ಸ್ಟಾಲಿನ್ ಮತ್ತು ಅವನ ಅನುಯಾಯಿಗಳು ಲೆನಿನ್ ಉತ್ತರಾಧಿಕಾರಕ್ಕಾಗಿ ನಡೆಸಿದ ಬಡಿದಾಟದ ಸಮಯದಲ್ಲಿ ಟ್ರಾಟ್ಸ್ಕಿಯಿಸಂ ಎಂಬ ಶಬ್ದವನ್ನು ತಮ್ಮ ಟೀಕೆಗೆ ಗುರಿಯಾಗಿ ಉಪಯೋಗಿಸಿದರು. ಲೆನಿನ್ನನ ನೇರ ವಿರೋಧಿ ಟ್ರಾಟ್ಸ್ಕಿ-ಎಂದು ಚಿತ್ರಿಸಲಾಯಿತು. ಸ್ಟಾಲಿನ್ ಮರಣಾಂತರ, 1956ರಲ್ಲಿ ನಡೆದ ವಿಸ್ಟಾಲಿನೀ ಕರಣದ ಸಮಯದಲ್ಲಿ ಪಕ್ಷದ ಇತಿಹಾಸಕಾರರು ಟ್ರಾಟ್ಸ್ಕಿಯ ಪುನರ್ಮೌಲ್ಯಮಾಪನ ಮಾಡಲು ಯತ್ನಿಸಿದರು. ಅವನ ಬಗ್ಗೆ ಮಾಡಲಾಗಿದ್ದ ಅರ್ಥಹೀನ ಆರೋಪಣೆಗಳನ್ನಂತೂ ಸೋವಿಯೆತ್ ಇತಿಹಾಸ ಲೇಖನಗಳಿಂದ ತೆಗೆದುಹಾಕಲಾಯಿತು.						(ಎ.ಎಂ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ